ಒರಟುಕಾಲು ಡೇಗೆ: ಪಕ್ಷಿವಂಶದ ಫಾಲ್ಕನಿಫಾರ್ಮಿಸ್ ಗಣದ ಆಕ್ಸಿ ಪಿಟ್ರಿಡಿ ಕುಟುಂಬಕ್ಕೆ ಸೇರಿದ ಬ್ಯೂಟಿಯೊ ಜಾತಿಯ ಒಂದು ಪ್ರಭೇದ. ಇದನ್ನು ಬಸûರ್ಡ್ಹಾಕ್ ಎಂಬ ಜನಪ್ರಿಯ ಹೆಸರಿನಿಂದ ಕರೆಯುವುದುಂಟು. ಇದರ ಶಾಸ್ತ್ರೀಯ ನಾಮ ಬ್ಯೂಟಿಯೊ ಲಗೋಪಸ್. ಈ ಪಕ್ಷಿಯ ಪಾದದ ಮೇಲಕ್ಕೆ ಮಂಡಿಯ ಕೆಳಗೆ ಅಂದರೆ ಮೊಳಕಾಲಿನಲ್ಲಿ ಪುಕ್ಕಗಳು ಇರುವುದರಿಂದ ಇದಕ್ಕೆ ಒರಟು ಕಾಲು ಡೇಗೆ ಎಂದು ಹೆಸರು. ಇದರ ಹೊರಮೈ ಬಣ್ಣ ಗಾಢ ಕಂದು; ರೆಕ್ಕೆಗಳ ಕೆಳಗೆ ತಿಳಿಕಂದು; ಬಾಲದ ರೆಕ್ಕೆಗಳು ಬಿಳುಪು. ಋತುಮಾಸದಲ್ಲಿ ಇವು ಎತ್ತರದ ಮರಗಳ ಮೇಲೆ ಅಥವಾ ಗುಡ್ಡಗಳ ಬಂಡೆಗಲ್ಲು ತುದಿಯಲ್ಲಿ ಗೂಡುಗಳನ್ನು ಮಾಡಿ 2-5 ಮೊಟ್ಟೆಗಳನ್ನಿಟ್ಟು ಮರಿ ಮಾಡುವುವು. ಈ ಡೇಗೆ ಉತ್ತರ ಯುರೋಪಿನಿಂದ ಬ್ರಿಟನ್ ದೇಶಕ್ಕೆ ಬಂದು ಚಳಿಗಾಲವನ್ನು ಕಳೆಯುತ್ತದೆ. ಮಿಕ್ಕ ಕಾಲಗಳಲ್ಲಿ ಸೈಬೀರಿಯ ಮತ್ತು ಉತ್ತರ ಕೆನಡ ಪ್ರದೇಶಗಳಲ್ಲಿ ವಾಸಿಸುವುದು. ಬ್ರಿಟನ್ ದೇಶದಲ್ಲಿ ಇನ್ನೊಂದು ಪ್ರಭೇದವಾದ ಬ್ಯೂಟಿಯೊ ಬ್ಯೂಟಿಯೊವನ್ನು ಸಾಮಾನ್ಯವಾಗಿ ಬಸóರ್ಡ್ ಎನ್ನುವರು. ಈ ಪ್ರಭೇದವೂ ಒರಟುಕಾಲು ಡೇಗೆಯೂ ಯುರೋಪಿನಿಂದ ಜಪಾನಿನವರೆಗೂ ಹರಡಿವೆ. ಈ ಡೇಗೆಗಳು ಸಾಧಾರಣವಾಗಿ ಸಣ್ಣ ಸ್ತನಿಗಳನ್ನೂ ಕೆಲವು ಸಾರಿ ದುಂಬಿಗಳನ್ನೂ ಪಕ್ಷಿಗಳನ್ನೂ ಬೇಟೆಯಾಡುವುವು. ಇವುಗಳ ಮಿಕ್ಕೆಲ್ಲ ವ್ಯವಹಾರಗಳೂ ಇತರ ಡೇಗೆಗಳಂತೆಯೆ.	(ಎನ್.ವಿ.ಎ.; ಕೆ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ